ದೇಸಾಯಿ, ಖಂಡೂಭಾಯಿ
1898-1975. ಗಾಂಧೀಜಿಯವರ ಸಿದ್ಧಾಂತಕ್ಕನುಗುಣವಾಗಿ ಕೈಗಾರಿಕಾ ಕಾರ್ಮಿಕರನ್ನು ಸಂಘಟಿಸಿದ. ಭಾರತೀಯ ಕಾರ್ಮಿಕ ಚಳುವಳಿಯ ಅಗ್ರನಾಯಕ. ಗುಜರಾತಿನ ವಲಸಾಡಿನಲ್ಲಿ 1898ರ ಅಕ್ಟೋಬರ್ 23ರಂದು ಜನಿಸಿದರು. ತಂದೆ ಕರಸನ್‍ಜೀ ದೇಸಾಯಿಯವರು ಸರ್ಕಾರಿ ನೌಕರಿಯಲ್ಲಿ ಸಾಮಾನ್ಯ ಅಧಿಕಾರಿಯಾಗಿದ್ದರೂ ಪ್ರಾಮಾಣಿಕತೆಗೆ ಹೆಸರಾಗಿದ್ದರು. ತಾಯಿ ಜಮುನಾರವರು ಮಗ ಖಂಡೂಭಾಯಿಗೆ ಮಿತಿ ವರಮಾನದಲ್ಲಿ ಸರಳ ಜೀವನ ನಡೆಸುವ ದಾರಿ ಹೇಳಿಕೊಟ್ಟರು.

ಖಂಡೂಭಾಯಿಯವರಿಗೆ ಕೇವಲ ಹದಿಮೂರು ವರ್ಷ ವಯಸ್ಸಾಗಿದ್ದಾಗ ಪಾರ್ವತಿಯವರನ್ನು ಕೊಟ್ಟು ಮದುವೆ ಮಾಡಲಾಯಿತು. ಆ ದಂಪತಿಗಳಿಗೆ ನಾಲ್ಕು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಜನಿಸಿದರು. 

ಖಂಡೂಭಾಯಿಯವರು ವಲಸಾಡಿನಲ್ಲಿ ಮೆಟ್ರಿಕ್ ಶಿಕ್ಷಣ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಮುಂಬಯಿಯ ವಿಲ್ಸನ್ ಕಾಲೇಜನ್ನು ಸೇರಿದರು. ಆದರೆ ಸ್ವಲ್ಪ ಕಾಲದಲ್ಲೇ 1920ರ ಅಸಹಕಾರ ಚಳುವಳಿ ಆರಂಭವಾದ್ದರಿಂದ ಕಾಲೇಜನ್ನು ತ್ಯಜಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು. ಅನಂತರ ಗುಜರಾತ್ ವಿದ್ಯಾಪೀಠವನ್ನು ಸೇರಿ ಅಲ್ಲಿ ಅರ್ಥಶಾಸ್ತ್ರ ಮತ್ತು ಇತಿಹಾಸದಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿ ಗಳಿಸಿದರು.

ವಿದ್ಯಾಭ್ಯಾಸ ಮುಗಿಸಿದ ಮೇಲೆ ಖಂಡೂಭಾಯಿಯವರು ಅಹಮದಬಾದಿನಲ್ಲಿ ಗಾಂಧಿಯವರು ಸ್ಥಾಪಿಸಿದ್ದ  ಜವಳಿ ಕಾರ್ಮಿಕ ಸಂಘಕ್ಕೆ (ಮಜೂರ್ ಮಹಾಜನ್) ಸೇರಿ ಕಾರ್ಮಿಕ ಚಳುವಳಿಯಲ್ಲಿ ಕೆಲಸ ಮಾಡಿದರು.  ಖ್ಯಾತ ಗಾಂಧೀ ಅನುಯಾಯಿಗಳಾದ ಅನುಸೂಯಾ ಸಾರಾಭಾಯಿ, ಶಂಕರರಾವ್ ಬ್ಯಾಂಕರ್ ಮತ್ತು ಗುಲ್ಜಾರಿ ಲಾಲ್ ನಂದಾರ ಜೊತೆಯಲ್ಲಿ ಕಾರ್ಮಿಕ ಸಂಘವನ್ನು  ಕಟ್ಟಿದರು. 1946ರ ವರಗೆ ಈ ಸಂಘದಲ್ಲಿ ಖಂಡೂಭಾಯಿಯವರು ಕಾರ್ಮಿಕರ ನಾಯಕರಾಗಿ ಸೇವೆ ಸಲ್ಲಿಸಿದರು. ಕಾರ್ಮಿಕರ ಹಿತಸಾಧನೆಗಾಗಿ ನಿಷ್ಠೆಯಿಂದ ಕೆಲಸ ಮಾಡಿ ಆದರ್ಶ ರೀತಿಯಲ್ಲಿ ಕಾರ್ಮಿಕರನ್ನು ಸಂಘಟಿಸಿದರು. ಕೆಲಸಗಾರರಲ್ಲಿ ಸ್ವದೇಶಿ, ಸ್ವಸಹಾಯ ಮತ್ತು ಪಾನನಿರೋಧ ತತ್ತ್ವಗಳನ್ನು ಪ್ರಭಾವಯುತವಾಗಿ ಪ್ರಚಾರ ಮಾಡಿದರು. ಮಜೂರ್ ಸಂದೇಶ್ ಎಂಬ ಅರ್ಧಸಾಪ್ತಾಹಿಕ ಪತ್ರಿಕೆಯನ್ನು ಇವರು ಪ್ರಾರಂಭಿಸಿದರು. ಕಾರ್ಮಿಕರ ಹಿತದೃಷ್ಟಿಯಿಂದ ಅವರಿಗೆ ನೇರವಾಗಿ ಅರ್ಥವಾಗುವಂತೆ ತಾವೇ ಗುಜರಾತಿ ಮತ್ತು ಇಂಗ್ಲಿಷಿನಲ್ಲಿ ಲೇಖನಗಳನ್ನು ಬರೆದು ಪ್ರಕಟಿಸುತ್ತಿದ್ದರು.

ಅಹಮದಬಾದಿನ ಮಜೂರ್ ಮಹಾಜನ್ ಸಂಘದಲ್ಲಿ ಅವರು ಸಲ್ಲಿಸಿದ ಸೇವೆ ಅವರಿಗೆ ಖ್ಯಾತಿ ತಂದಿತು. ಅವರು ಭಾರತ ರಾಷ್ಟ್ರೀಯ ಕಾರ್ಮಿಕ ಮಹಾ ಸಂಘದ (ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್) ಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿಯೂ (1947-50) ಅನಂತರ ಅದರ ಅಧ್ಯಕ್ಷರಾಗಿಯೂ (1950-53) ಇದ್ದರು.
ಖಂಡೂಭಾಯಿಯವರು 1937ರಲ್ಲಿ ಮುಂಬಯಿಯ ವಿಧಾನ ಸಭೆಗೂ 1946ರಲ್ಲಿ ಭಾರತದ ಸಂವಿಧಾನ ರಚನಾ ಸಭೆಗೂ ಚುನಾಯಿತರಾದರು. ಅನಂತರ 1952-57 ರಲ್ಲಿ ಲೋಕ ಸಭಾ ಸದಸ್ಯರಾಗಿಯೂ 1957-1968ರಲ್ಲಿ ರಾಜ್ಯಸಭೆಯ ಸದಸ್ಯರಾಗಿಯೂ ಇದ್ದರು. 1954ರಿಂದ 1957 ರವರಗೆ ನೆಹರೂ ಮಂತ್ರಿಮಂಡಲದಲ್ಲಿ ಕಾರ್ಮಿಕ ಖಾತೆಯ ಸಚಿವರಾಗಿ ಕೆಲಸ ಮಾಡಿದರು.

ನುರಿತ ರಾಜಕಾರಿಣಿಯೂ ಸಾರ್ವಜನಿಕ ವಿಚಾರಗಳಲ್ಲಿ ಸೂಕ್ಷ್ಮಮತಿಯೂ ಆಗಿದ್ದ ದೆಸಾಯಿಯವರು ಹಲವಾರು ಆಯೋಗಗಳ ಸದಸ್ಯರಾಗಿಯೂ ಕೂಡ ಕೆಲಸ ಮಾಡಿದರು. ಅವುಗಳಲ್ಲಿ ಮುಖ್ಯವಾದವು ಮುಂಬಯಿಯ ಜವಳಿ ಕೈಗಾರಿಕೆಯ ವಿಚಾರಣಾ ಸಮಿತಿ (1931), ಹಣಕಾಸು ಆಯೋಗ (1948), ಲಾಭದ ಹಂಚಿಕೆ ಹಾಗೂ ನ್ಯಾಯ ಮಜೂರಿ ಸಮಿತಿ (1949), ರಾಷ್ಟ್ರೀಯ ರಕ್ಷಣಾ ಮಂಡಲಿ (1962-63), ವಾಣಿಜ್ಯ ಮಂಡಲಿ (1964-67). ಇವಲ್ಲದೆ ಇವರು ಆಯಿಲ್ ಇಂಡಿಯ ಕಂಪನಿಯ ಅಧ್ಯಕ್ಷರಾಗಿದ್ದರು. ಇವರು ಭಾರತದ ಕೈಗಾರಿಕಾ ಹಣಕಾಸು ನಿಧಿ ಮತ್ತು ನೌಕರರ ರಾಜ್ಯ ವಿಮಾ ನಿಧಿಯ ನಿರ್ದೇಶಕ ಮಂಡಲಿಯಲ್ಲಿದ್ದರು. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಇಂಟನ್ರ್ಯಾಷನಲ್ ಲೇಬರ್ ಆರ್ಗನೈಸೇಷನ್) ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

1969ರಿಂದ 1975ರ ಅವಧಿಯ ವರಗೆ ಇವರು ಆಂಧ್ರ ಪ್ರದೇಶದ ರಾಜ್ಯಪಾಲರಾಗಿದ್ದರು. ಆ ಹುದ್ದೆಯಿಂದ ನಿವೃತ್ತರಾದ ಮೇಲೆ ಅಹಮದಾಬಾದಿಗೆ ಮರಳಿ ಅಲ್ಲಿಯ ಮಜೂರ್ ಮಹಾಜನ್ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 1975ರ ಏಪ್ರಿಲ್ 17ರಂದು ಹೃದಯಾಘಾತದಿಂದ ಖಂಡೂಭಾಯಿ ದೇಸಾಯಿಯವರು ನಿಧನರಾದರು. 
(ಬಿ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ